ಅರ್
	ದಕ್ಷಿಣ ಮೆಸಪೊಟೇಮಿಯದ ಸುಮೇರಿಯನ್ ಸಂಸ್ಕøತಿಗೆ ಸಂಬಂಧಿಸಿದ ಪ್ರಾಚೀನ ನಗರ. ಯೂಫ್ರಿಟಿಸ್ ನದಿಯ ದಡದಲ್ಲಿ ಈಗಿನ ಬಾಗ್‍ದಾದ್‍ಗೆ ಸಮೀಪದಲ್ಲಿದೆ. ಅರ್‍ನಲ್ಲಿ ನಡೆದ ಪುರಾತತ್ತ್ವ ಶೋಧನೆಗಳಿಂದ ಸುಮೇರಿಯ ಸಂಸ್ಕøತಿಯ ವೈಶಿಷ್ಟ್ಯ ಬೆಳಕಿಗೆ ಬಂದಿದೆ. ಈಗಿನ ಟೆಲ್ ಮುಕಾಯರ್ ಪ್ರದೇಶವೇ ಪ್ರಾಚೀನ ಅರ್ ಪಟ್ಟಣ. ಇದು 19ನೆಯ ಶತಮಾನದಿಂದಲೂ ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿದ್ದರೂ ಇಲ್ಲಿ ಪರಿಶೋಧನೆ ಪ್ರಾರಂಭವಾದದ್ದು 1854ರಿಂದ. ಈ ಸ್ಥಳವನ್ನು ಮೊದಲಬಾರಿಗೆ ಅಗೆದು ಅವಶೇಷಗಳನ್ನು ಬೆಳಕಿಗೆ ತಂದ ಕೀರ್ತಿ ಜೆ. ಇ. ಟೇಲರ್ ಎಂಬ ಪುರಾತತ್ತ್ವಶೋಧಕನಿಗೆ ಸೇರಿದ್ದು. ಅನಂತರ ಲಂಡನ್ನಿನ ಬ್ರಿಟಿಷ್ ಮ್ಯೂಸಿóಯಂ ಅಧಿಕಾರಿಗಳೂ ಪೆನ್‍ಸಿಲ್ವೇನಿಯ ವಿಶ್ವವಿದ್ಯಾನಿಲಯದ ಅಧಿಕಾರಿಗಳೂ ಅರ್‍ನಲ್ಲಿ ಶೋಧ ನಡೆಸಿದರು. 1922ರಿಂದ ಹನ್ನೆರಡು ವರ್ಷಗಳ ಕಾಲ ಸತತವಾಗಿ ಕೆಲಸಮಾಡಿ ಅರ್ ನಗರದ ಅವಶೇಷಗಳನ್ನು ಬಹುವಾಗಿ ಹೊರತೆಗೆದ ಕೀರ್ತಿ ಸರ್ ಲಿಯೋನಾರ್ಡ್ ವುಲ್ಲಿ ಎಂಬ ಪ್ರಾಕ್ತನಶಾಸ್ತ್ರಜ್ಞನಿಗೆ ಸೇರಬೇಕು. ಈತ ನಡೆಸಿದ ಉತ್ಖನನಗಳಿಂದ ಅರ್ ನಗರದ ಸಂಪೂರ್ಣ ಚರಿತ್ರೆ ಬೆಳಕಿಗೆ ಬಂದಿದೆ.

	ಈ ನಗರಕ್ಕೆ ಸಮೀಪದಲ್ಲಿರುವ ಉಬಾಯ್ಡ್‍ನಲ್ಲಿ ದೊರಕಿರುವ ಅವಶೇಷಗಳೇ ಇಲ್ಲಿನ ಪ್ರಾಚೀನತಮ ನಾಗರಿಕತೆಯ ಕುರುಹುಗಳು. ಮಣ್ಣಿನ ಮಡಿಕೆಯ ಹೋಲಿಕೆಗಳಿಂದ ಇಲ್ಲಿಯ ನಾಗರಿಕತೆ ಇರಾನಿಗೆ ಸಂಬಂಧಿಸಿತ್ತೆಂದು ಹೇಳಬಹುದು. ಉಬಾಯ್ಡ್ ಸಂಸ್ಕøತಿಯ ಅನಂತರ ಸುಮೇರಿಯ ಸಂಸ್ಕøತಿ ಬೇರೂರುವುದಕ್ಕೆ ಮೊದಲು ಈ ಎರಡು ವಿಭಿನ್ನ ಸಂಸ್ಕøತಿಯ ಜನಗಳು ಅಲ್ಲಿ ವಾಸವಾಗಿದ್ದರೆಂದು ಉರುಕ್‍ನಲ್ಲಿ ದೊರಕಿರುವ ಅವಶೇಷಗಳಿಂದಲೂ ಜಂಡೆಟ್‍ನಾಸ್ರ್ ಎಂಬಲ್ಲಿ ದೊರಕಿರುವ ಅವಶೇಷಗಳಿಂದಲೂ ತಿಳಿದುಬರುತ್ತದೆ. ಈ ಸಂಸ್ಕøತಿಯ ಕಾಲವನ್ನು ಕ್ರಿ.ಪೂ. 4400-3000 ಎಂದು ನಿರ್ಧರಿಸಬಹುದು. ಇವುಗಳ ಅನಂತರ ಅರ್ ನಗರದ ರಾಜವಂಶಗಳ ಸಂಸ್ಕøತಿಯ ಕಾಲವನ್ನು ಕಾಣುತ್ತೇವೆ. ಈ ರಾಜವಂಶದ ಸ್ಥಾಪಕ ಮೆಸ್-ಅನ್ನಿ ಪದ್ದನೆಂದು ತಿಳಿಯುತ್ತದೆ. ಈ ವಂಶದ ಅನೇಕ ರಾಜರುಗಳ ನೇತೃತ್ವದಲ್ಲಿ ಅರ್ ನಗರ ಸರ್ವತೋಮುಖವಾದ ಪ್ರಗತಿಯನ್ನು ಸಾಧಿಸಿ ಸುಮೇರಿಯ ಸಂಸ್ಕøತಿ ಪ್ರಸಿದ್ಧವಾಗಲು ಸಹಾಯಮಾಡಿತು. ಈ ಕಾಲದಲ್ಲಿ ರಾಜವಂಶ ಬೇರೂರಿದಂತೆ ನ್ಯಾಯಾಂಗ ವಿಶೇಷವಾಗಿ ಬೆಳೆಯಿತು. ರಾಜತ್ವದ ಜೊತೆಯಲ್ಲೇ ಮತೀಯ ಧರ್ಮಗಳೂ ಬೆಳೆದುವು.  ಇದರಿಂದ ದೇವತೆಗಳ ಸಮೂಹವೊಂದು ರಚಿತವಾಯಿತು. ದೇವತೆಗಳಿಗೆ ದೇವಾಲಯವನ್ನು ಕಟ್ಟುವ ಕಾರ್ಯಕ್ಕೆ ಹೆಚ್ಚಾಗಿ ಪ್ರೋತ್ಸಾಹ ಸಿಕ್ಕಿ, ವಾಸ್ತು ಮತ್ತು ಶಿಲ್ಪಕಲೆಗಳು ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದುವು. ಇವುಗಳನ್ನು ಕಾಪಾಡಿಕೊಂಡು ಬರಲು ಮತ್ತು ಶತ್ರುಗಳನ್ನು ಸೋಲಿಸಲು ಸುಭದ್ರ ಸೈನ್ಯದ ವ್ಯವಸ್ಥೆ ರೂಢಿಗೆ ಬಂದಿತು. ಈ ಎಲ್ಲ ಪ್ರಗತಿಗಳಿಂದ ಸಾಮಾನ್ಯ ಜನಗಳ ಜೀವನ ಸುಖಮಯವಾಗುವಂತೆ ಆಯಿತು. ಇದಕ್ಕೆ ಉದಾಹರಣೆಯಾಗಿ ಮೊದಲನೆಯ ರಾಜವಂಶದ ಗೋರಿಗಳನ್ನು ನೋಡಬಹುದು. ಅಗೆದ ಈ ಗೋರಿಗಳು ವಿಶಾಲವಾಗಿದ್ದು ಬಹು ಬೆಲೆಬಾಳುವ ಆಭರಣಗಳು, ಮಂಚ, ಕುರ್ಚಿ, ಮಡಕೆ ಮುಂತಾದವುಗಳನ್ನೊಳಗೊಂಡಿವೆ. ಜೊತೆಗೆ ರಾಜನ ಸೇವೆಯಲ್ಲಿ ನಿರತರಾಗಿದ್ದ ಎಲ್ಲ ಆಳುಕಾಳುಗಳ ಗೋರಿಗಳನ್ನೂ ಕಾಣಬಹುದು. ಸ್ವಲ್ಪ ಕಾಲಾನಂತರ ಅರ್ ನಗರ ಇತರ ನಗರಗಳ ಆಳ್ವಿಕೆಗೆ ಒಳಪಟ್ಟಿತು.  ಮೂರನೆಯ ರಾಜವಂಶದ ಸ್ಥಾಪಕನಾದ ಅರ್‍ನಮ್ಮು ಎಂಬ ರಾಜನ ಕಾಲದಲ್ಲಿ ಮತ್ತೆ ಪ್ರಾಮುಖ್ಯಕ್ಕೆ ಬಂತು. ಈತ ನಿರ್ಮಿಸಿದ (2100) ಕಟ್ಟಡಗಳಲ್ಲಿ ಜಿûಗುರೇಟು ಮುಖ್ಯವಾದುದು. ಇದು 210' ಉದ್ದ, 140' ಅಗಲ ಮತ್ತು 54' ಎತ್ತರವಿರುವ ಇಟ್ಟಿಗೆಗಳಿಂದ ಕಟ್ಟಿದ ಭವ್ಯಸೌಧ. ಎಲ್ಲ ಜಿûಗುರೇಟ್‍ಗಳಂತೆ ಇದೂ ಚೌಕ ಪ್ರಕಾರಗಳನ್ನುಳ್ಳ ಕಟ್ಟಡ. ಹೊರಗಿನ ಪ್ರಾಕಾರಕ್ಕಿಂತ ಒಳಗಿನ ಪ್ರಾಕಾರ ಕಿರಿದಾಗಿರುತ್ತ ಬಂದು ಕೊನೆಗೆ ಎತ್ತರದ ಜಗಲಿಯಲ್ಲಿ ಕೊನೆಗೊಳ್ಳುತ್ತದೆ. ಇದೇ ದೇವರ ವಾಸಸ್ಥಾನ. ಅರ್‍ನಮ್ಮುವಿನಿಂದ ರಚಿತವಾದ ಜಿûಗುರೇಟ್ ದೇವಾಲಯಕ್ಕೆ ಮುಂಭಾಗದಲ್ಲಿ ಮೂರು ದಿಕ್ಕಿನಲ್ಲೂ ಮೆಟ್ಟಲುಗಳಿವೆ. ಇವುಗಳನ್ನು ಹತ್ತಿ ಒಳಗಿನ ಪ್ರಾಕಾರಕ್ಕೆ ಹೋಗಬೇಕು. ಈ ಪ್ರಾಕಾರಗಳ ಗೋಡೆಯ ಒಳಭಾಗಗಳು ಶಿಲ್ಪಫಲಕಗಳಿಂದ ಅಲಂಕೃತವಾಗಿವೆ. ಈ ಫಲಕಗಳು ಅರ್ ನಗರದ ಚರಿತ್ರೆಯನ್ನು ತಿಳಿಸುತ್ತವೆ.

	ಕ್ರಿ..ಪೂ. (1800)ರಲ್ಲಿ ಉಂಟಾದ ಕ್ಷೋಭೆಯಲ್ಲಿ ಅರ್ ನಗರ ನಾಶವಾಗಿ ಕಟ್ಟಡಗಳೆಲ್ಲ ಒಡೆಯಲ್ಪಟ್ಟು, ಅವುಗಳ ಭವ್ಯತೆ ನಾಶವಾಯಿತು. ಮುನ್ನೂರು ವರ್ಷಗಳ ಅನಂತರ ಅಲ್ಲಿ ಆಳಿದ ರಾಜರು ಅರ್ ನಗರದ ಪುನರ್ನಿರ್ಮಾಣ ಕಾರ್ಯವನ್ನು ಕೈಗೊಂಡರು. ಕ್ರಿ..ಪೂ.(7)ನೆಯ ಶತಮಾನದಿಂದ ಮತ್ತೆ ಅರ್ ನಗರ ಪ್ರಾಮುಖ್ಯ ಪಡೆಯಿತು. ನೆಬುಚೆಡ್ನೆಸಾóರ್ ಎಂಬ ರಾಜ ಇಲ್ಲಿನ ದೇವಾಲಯಗಳನ್ನು ಪುನರ್ನಿರ್ಮಿಸಿ ಅರ್ ನಗರದ ಸೌಂದರ್ಯವನ್ನು ಹೆಚ್ಚಿಸಿದ. ಆದರೆ ಪರ್ಷಿಯನ್ನರ ದಂಡಯಾತ್ರೆಗಳ ಅನಂತರ ಸುಮೇರಿಯ ಮತಧರ್ಮಗಳು ಅವನತಿ ಹೊಂದಿದುವು. ಅವುಗಳ ಜೊತೆಯಲ್ಲಿಯೇ ಜಿûಗುರೇಟ್‍ಗಳೂ ನಾಶವಾದುವು. ಹೀಗಾಗಿ ಸುಮಾರು ಕ್ರಿ..ಪೂ. 4ನೆಯ ಶತಮಾನದಿಂದ ಅರ್ ನಗರ ಪೂರ್ಣ ನಾಶವಾಗಿ ಮತ್ತೆ ಉಚ್ಛ್ರಾಯ ಸ್ಥಿತಿಯನ್ನು ಕಾಣಲೇ ಇಲ್ಲ.										
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ